ವಿಷ್ಣುವರ್ಧನ 2

	ಬಾದಾಮಿ ಚಳುಕ್ಯ ವಂಶದ ಎರಡನೆಯ ಪುಲಕೇಶಿಯ ತಮ್ಮ ಮತ್ತು ವೆಂಗಿಯ ಚಾಳುಕ್ಯ ಮನೆತನದ ಸ್ಥಾಪಕ. ಇವನನ್ನು ಶಾಸನಗಳು ಕುಬ್ಜ ಎಂದು ಕರೆದಿವೆ. ಎರಡನೆಯ ಪುಲಕೇಶಿ ಸು. 611ರಲ್ಲಿ ಇವನನ್ನು ಯುವರಾಜನಾಗಿ ನೇಮಿಸಿ ರಾಜಧಾನಿಯಲ್ಲಿರಿಸಿ ತಾನು ಪೂರ್ವದೇಶಗಳ ಕಡೆ ದಂಡಯಾತ್ರೆ ಹೊರಟ. ಪೂರ್ವದೇಶಗಳನ್ನು ಗೆದ್ದು ಹಿಂತಿರುಗಿದ ಆತ ಇವನನ್ನು ಆ ಭಾಗಗಳ ಅಧಿಪತಿಯಾಗಿ ಮಾಡಿದ. ಇದಾದ ಅನಂತರ ಈತ ಸ್ವಂತ ಪರಾಕ್ರಮದಿಂದ ಆಂಧ್ರದ ಅನೇಕ ಭಾಗಗಳನ್ನು ಗೆದ್ದು, ವಿಷಮಸಿದ್ಧಿ ಎಂಬ ಬಿರುದಿನಿಂದ ಶಾಸನಗಳನ್ನು ಬರೆಸಿದ. ಗುಂಟೂರು, ನೆಲ್ಲೂರು ಮುಂತಾದ ಪ್ರದೇಶಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡು ವೆಂಗಿಯ ದೊರೆಯಾಗಿ ಆಳಿದ. ಇವನು ಸ್ವತಂತ್ರವಾಗಿ ಆಳಲು ಪ್ರಾರಂಭಿಸಿದುದನ್ನು ಗಮನಿಸಿದ ಪುಲಕೇಶಿ ಇವನನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಇಚ್ಛಿಸದಿದ್ದುದ ರಿಂದ ಇವನ ಸಂತತಿಯವರೇ ವೆಂಗಿಯ ರಾಜ್ಯದ ಹಕ್ಕುದಾರರಾದರು. ಇದರಿಂದಾಗಿ ಈತ ವೆಂಗಿ ರಾಜ್ಯದ ಸ್ಥಾಪಕನಾದ.				
				(ಎ.ವಿ.ಎನ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ